ದೂರಸಂವೇದಿ ಉಪಗ್ರಹಗಳು
ಬಾಹ್ಯಾಕಾಶ ಸಂಶೋಧನಾ ದೂರಸಂವೇದಿ ಉಪಗ್ರಹಗಳು. ಇಂದು ಆಗಸದ ದೂರದ ಕಕ್ಷೆಯಲ್ಲಿದ್ದುಕೊಂಡು ಭೂಮಿಯ ಸುತ್ತ ತಿರುಗುತ್ತಾ ಭೂಮಿ ಮೇಲಿನ ಅನೇಕ ಬಗೆಯ ವಿದ್ಯಮಾನಗಳನ್ನು ಕುರಿತು ಸೂಕ್ಷ್ಮಾತಿಸೂಕ್ಷ್ಮವಾದ, ಕರಾರುವಾಕ್ಕಾದ ಹಾಗೂ ನಂಬಲರ್ಹ ವಾದ ಮಾಹಿತಿಗಳನ್ನು ದೂರಸಂವೇದಿ ಉಪಗ್ರಹಗಳು ನೀಡುತ್ತಿವೆ.

ದೂರಸಂವೇದಿ ಮಾಹಿತಿಗಳ ಬಳಕೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ. ಭೂಮಿಗೆ ದೂರ, ಬಹುದೂರದಲ್ಲಿ ನಿಂತು ಅಲ್ಲಿಂದಲೇ ಸಂವೇದಿಸಿ, ಮಾಹಿತಿಗಳನ್ನು ಚಿತ್ರಗಳ ರೂಪದಲ್ಲಿ ಅಥವಾ ವಿವಿಧ ಪರಿಚೋದಕಗಳ ಮೂಲಕ ಅಳೆದು ದಾಖಲಿಸಿ ಅವೆಲ್ಲವನ್ನೂ ಭೂಮಿಗೆ ವರ್ಗಾಯಿಸುವುದೇ ದೂರಸಂವೇದಿ ಉಪಗ್ರಹಗಳ ಕಾರ್ಯ. ಸಾಮಾನ್ಯವಾಗಿ ಇದಕ್ಕೆ ವಿದ್ಯುತ್ಕಾಂತೀಯ ಕಿರಣಗಳನ್ನು ಮಾಧ್ಯಮವನ್ನಾಗಿ ಬಳಸಿಕೊಳ್ಳಲಾಗುತ್ತದೆ. ಉಪಗ್ರಹಗಳ ಅಳವಿಗೆ ಬರುವ ಎಲ್ಲಾ ದತ್ತಾಂಶಗಳನ್ನು ಅವುಗಳಲ್ಲೇ ಇರುವ ಗಣಕಗಳಲ್ಲಿ ವ್ಯವಸ್ಥಿತವಾಗಿ ಸಂಚಯನ, ವರ್ಗೀಕರಣ, ಸುವ್ಯವಸ್ಥಿತ ಜೋಡಣೆ - ಮುಂತಾದ ದತ್ತಸಂಸ್ಕರಣೆಯ ಕ್ರಿಯೆಗಳಿಗೆ ಒಳಪಡಿಸಿ, ಮಾಹಿತಿಗಳನ್ನು ವಿಶ್ಲೇಷಿಸಲು ಸಾಧ್ಯವಾಗುವ ದತ್ತ ವಿಶ್ಲೇಷಣಾ ಸೌಲಭ್ಯಗಳನ್ನು ದೂರಸಂವೇದಿ ಉಪಗ್ರಹಗಳಲ್ಲಿ ಅಳವಡಿಸಲಾಗುತ್ತದೆ. 

ದತ್ತ ಸಂಚಯನ ಸೌಲಭ್ಯವು ಹೊಂದಿರುವ ಮುಖ್ಯ ಅಂಶಗಳು:
ಮಾಹಿತಿ ಪ್ರಸರಣಕ್ಕೆ ಬೇಕಾದ ವಿಕಿರಣಗಳನ್ನು ಹೊರಸೂಸುವ ಮೂಲವ್ಯವಸ್ಥೆ 
ಭೂಮಿಯ ಯಾವ ಯಾವ ಪ್ರದೇಶಗಳ ಮೇಲೆ ಕಣ್ಣಿಡಬೇಕೆಂಬ ಬಗ್ಗೆ ಮಾಹಿತಿ ಹಾಗೂ
ಮಾಹಿತಿ ಸಂಗ್ರಹಣೆಗೆ ಅಗತ್ಯವಾದ ಸೂಕ್ಷ್ಮಸಂವೇದಿ ಉಪಕರಣ ಮುಂತಾದ ಆಧುನಿಕ ಸಲಕರಣೆ 

ದೂರಸಂವೇದಿ ಉಪಗ್ರಹದ ಆಂಟೆನಾಗಳನ್ನು ಭೂಮಿಯ ಮೇಲಿನ ವಸ್ತುಗಳತ್ತ ಕೇಂದ್ರೀಕರಿಸಿದಾಗ ಅಲ್ಲಿಂದ ಪ್ರತಿಫಲಿಸಲ್ಪಡುವ ವಿಕಿರಣಗಳನ್ನು ಉಪಗ್ರಹದಲ್ಲಿನ ಅತಿ ಸೂಕ್ಷ್ಮ ಸಂವೇದಕಗಳು ಗ್ರಹಿಸಿ ದತ್ತಾಂಶಗಳನ್ನಾಗಿ ಪರಿವರ್ತಿಸುತ್ತವೆ. ಈ ದತ್ತಾಂಶಗಳನ್ನು ಉಪಗ್ರಹದಲ್ಲಿನ ದತ್ತ ಸಂಸ್ಕಾರಕ ಹಾಗೂ ದತ್ತ ವಿಶ್ಲೇಷಣಾ ತಂತ್ರಾಂಶಗಳಿಂದ ಪೂರ್ವನಿಯೋಜಿತ ಕ್ರಿಯಾವಿಧಿಗಳಿಗೆ ಅನುಗುಣವಾಗಿ ಸಂಸ್ಕರಿಸಲಾಗುತ್ತದೆ. ಹೀಗೆ ಅಂತಿಮವಾಗಿ ಸಿದ್ಧವಾಗುವ ವ್ಯವಸ್ಥಿತ ಮಾಹಿತಿಗಳನ್ನು ಭೂಕೇಂದ್ರಗಳಿಗೆ ಪ್ರೇಷಿಸಲಾಗುತ್ತದೆ.

ಭೂಮಿಯ ಮೇಲಿನ ವಸ್ತುಗಳಿಂದ ಪ್ರತಿಫಲಿತವಾಗುವ ವರ್ಣವಿಕಿರಣಗಳು ಪ್ರತಿಯೊಂದುವಸ್ತುವಿಗೂ ಅನನ್ಯವಾಗಿರು ವುದೇ ಈ ಸಂಸ್ಕರಣೆಯನ್ನು ಕಾರ್ಯಸಾಧ್ಯವಾಗಿಸಿದೆ. ಇದೇ ದೂರಸಂವೇದಿ ತಂತ್ರe್ಞÁನದ ಯಶಸ್ಸಿನ ತಿರುಳು. ಉದಾಹರಣೆಗೆ ಸಸ್ಯಗಳ ಬಣ್ಣ, ಎಲೆಗಳ ರಚನೆ, ಅವುಗಳಲ್ಲಿನ ನೀರಿನ ಅಂಶ ಮುಂತಾದವು ರಕ್ತಾತೀತ ವಿಕಿರಣದಲ್ಲಿ ಸಾಕಷ್ಟು ವ್ಯತ್ಯಯಗಳನ್ನು ಉಂಟುಮಾಡುತ್ತವೆ. ಈ ಕಾರಣದಿಂದಲೇ ಸಸ್ಯಗಳ ಸ್ವರೂಪ ಅವುಗಳ ಬೆಳವಣಿಗೆಯ ಹಂತಗಳು, ಬೆಳವಣಿಗೆಯ ತೀವ್ರ್ರತೆ ಮುಂತಾದ ಅಂಶಗಳನ್ನು ಸಂವೇದಕಗಳು ಸಂಗ್ರಹಿಸುವ ಮಾಹಿತಿಗಳಲ್ಲಿ ಕಂಡುಬರುವ ಸ್ಪಷ್ಟವಾದ ವ್ಯತ್ಯಾಸಗಳಿಂದ ಗುರುತಿಸಬಹುದು.

ಸಸ್ಯಗಳ ಬೆಳವಣಿಗೆಯು ಭೂಸಾರ, ಭೂಕ್ಷಾರ, ಋತುಮಾನಗಳ ವ್ಯತ್ಯಾಸ ಮುಂತಾದ ಅಂಶಗಳನ್ನು ಅವಲಂಬಿಸಿದ್ದು ಈ ಅಂಶಗಳನ್ನೂ ದೂರಸಂವೇದಿ ವ್ಯವಸ್ಥೆಯು ಗ್ರಹಿಸಬಲ್ಲದು. ಮಣ್ಣಿನಲ್ಲಿರುವ ಜಲಾಂಶ, ಸಾವಯವ ವಸ್ತುಗಳ ಪ್ರಮಾಣ, ಕಬ್ಬಿಣದ ಆಕ್ಸೈಡ್ ಪ್ರಮಾಣ, ಮಣ್ಣು ಹಾಗೂ ಮರಳಿನ ಶೇಕಡಾವಾರು ಪ್ರಮಾಣ - ಮುಂತಾದ ಅಂಶಗಳಲ್ಲಿ ಇರುವ ವ್ಯತ್ಯಾಸಗಳು ಸಂವೇದಕಗಳ ಮೂಲಕ ಗ್ರಹಿಸುವ ಮಾಹಿತಿಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ. ಕ್ಲೋರೊಫಿಲ್ ಪ್ರಮಾಣವು ಜಾಸ್ತಿ ಇದ್ದರೆ, ಅಂತಹ ಸಸ್ಯಗಳಿಂದ ಬರುವ ವಿಕಿರಣಗಳ ಗುಣವೇ ಬೇರೆಯಾಗಿರುತ್ತದೆ.

ದೂರಸಂವೇದಿ ಉಪಗ್ರಹಗಳು ಕಳುಹಿಸುವ ಅಪಾರ ಮಾಹಿತಿಗಳನ್ನು ಭೂಕೇಂದ್ರಗಳಲ್ಲಿ ಸಂಗ್ರಹಿಸಿ, ಸಂಸ್ಕರಿಸಿ ಅತ್ಯಂತ ಲಾಭದಾಯಕವಾಗಿ ಬಳಸಿಕೊಳ್ಳುವುದು ಈಗ ಸಾಧ್ಯವಾಗಿದೆ. ಇಂತಹ ಕಾರ್ಯಗಳ ನಿರ್ವಹಣೆಗಾಗಿಯೇ ಇಂದು ಸಾವಿರಾರು ಕೃತಕ ಉಪಗ್ರಹಗಳು ನೂರಾರು ಮೈಲಿಗಳಷ್ಟು ಎತ್ತರದಲ್ಲಿ ವಿವಿಧ ಕಕ್ಷೆಗಳಲ್ಲಿ ಭೂಪ್ರದಕ್ಷಿಣೆ ಮಾಡುತ್ತಿವೆ. ಇಂದು ಭಾರತವು ಹಾರಿಬಿಟ್ಟಿರುವ ಹಲವಾರು ದೂರಸಂವೇದಿ ಉಪಗ್ರಹಗಳು ಸುಮಾರು 800 ರಿಂದ 900 ಕಿಲೋಮೀಟರ್ ಎತ್ತರದ ಕಕ್ಷೆಗಳಲ್ಲಿ ಸ್ಥಾಪಿತಗೊಂಡಿವೆ. ಅವುಗಳು ಪ್ರತಿಬಾರಿ ಭಾರತದ ಮೇಲೆ ಹಾದು ಹೋಗುವಾಗಲೂ ಅವುಗಳಲ್ಲಿರುವ ಸೂಕ್ಷ್ಮ ಕ್ಯಾಮೆರಾಗಳು ಭಾರತೀಯ ಭೂ ಪ್ರದೇಶದ ಚಿತ್ರಗಳನ್ನು ಸೆರೆಹಿಡಿಯುತ್ತವೆ. ಉಪಗ್ರಹಗಳಲ್ಲಿರುವ ಸಂಸ್ಕಾರಕಗಳು (ಪ್ರಾಸೆಸರ್‍ಗಳು) ಈ ಆಂಕಿಕ (ಡಿಜಿಟಲ್) ಚಿತ್ರಗಳನ್ನು ರೇಡಿಯೋ ತರಂಗಗಳನ್ನಾಗಿ ಪರಿವರ್ತಿಸಿ ಭೂಮಿಗೆ ರವಾನಿಸುತ್ತವೆ. ಈ ರೇಡಿಯೋ ತರಂಗಗಳನ್ನು ಬೆಂಗಳೂರು ಹೈದರಾಬಾದ್ ಮುಂತಾದ ಪ್ರದೇಶಗಳಲ್ಲಿರುವ ಭೂಕೇಂದ್ರಗಳಲ್ಲಿ ಗ್ರಹಿಸಿ ಅವುಗಳನ್ನು ಪುನರ್ ಸಂಸ್ಕರಿಸಿ ಗಣಕಗಳಲ್ಲಿ ಚಿತ್ರರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ವಸ್ತುವೊಂದನ್ನು ಸುಮಾರು 20 ರಿಂದ 25 ಅಡಿಗಳ ದೂರದಿಂದ ಕ್ಯಾಮೆರಾ ಮೂಲಕ ಗ್ರಹಿಸಿದಷ್ಟು ಸ್ಪಷ್ಟವಾಗಿ ಈ ಚಿತ್ರಗಳು ಮೂಡುತ್ತವೆ. 

ಮುಖ್ಯವಾಗಿ, ಈ ದೂರಸಂವೇದಿ ಉಪಗ್ರಹಗಳನ್ನು ಭಾರತದಲ್ಲೇ ನಿರ್ಮಿಸಿ ಉಡಾಯಿಸಲಾಗಿದೆ. ಭಾರತದಲ್ಲಿ ದೂರಸಂವೇದಿ ಉಪಗ್ರಹಗಳ ಅಭಿವೃದ್ಧಿ ಹಾಗೂ ನಿರ್ಮಾಣ ಪರಿಯೋಜನೆಗಳು 1982ರಲ್ಲಿ ಆರಂಭವಾದವು. ಹೀಗೆ ನಿರ್ಮಾಣವಾಗಿ 1988ರಲ್ಲಿ ರಷ್ಯಾದ ಬೈಕನೇರ್ ಉಡಾವಣಾ ವೇದಿಕೆಯಿಂದ ಅಂತರಿಕ್ಷಕ್ಕೆ ಚಿಮ್ಮಿದ ಐಆರ್‍ಎಸ್-1ಎ ದೂರಸಂವೇದಿ ಉಪಗ್ರಹದಲ್ಲಿ ಅಳವಡಿಸಲಾಗಿದ್ದ ಸೂಕ್ಷ್ಮ ಸಂವೇದಿ ಉಪಕರಣಗಳು ಅಧಿಕ ಆವೃತ್ತಿ ಸಂಖ್ಯೆಗಳ ಸೂಕ್ಷ್ಮ ತರಂಗಗಳ ಜೊತೆ ವ್ಯವಹರಿಸುವ ಸಾಮಥ್ರ್ಯಗಳನ್ನು ಹೊಂದಿದ್ದವು. ಅಲ್ಲದೆ ಉಪಗ್ರಹದಲ್ಲಿನ ಕ್ಯಾಮೆರಾಗಳು ಚಿತ್ರಗಳನ್ನು ಸೆರೆ ಹಿಡಿಯುವಾಗ, ಉಪಗ್ರಹದ ಯಾವ ಯಾವ ಭಾಗಗಳು ಯಾವ ಯಾವ ಕೋನಗಳಿಗೆ ಬಾಗಿರಬೇಕು ಮುಂತಾದ ಹಲವಾರು ನಿಯಂತ್ರಣಾ ಆದೇಶಗಳನ್ನು ಭೂಮಿಯ ನಿಯಂತ್ರಣ ಕೇಂದ್ರಗಳಿಂದ ಸ್ವೀಕರಿಸುವಂತಹ ತಾಂತ್ರಿಕ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗಿತ್ತು. ಆರಂಭದ ಕೆಲವು ತೊಡಕುಗಳನ್ನು ಭೂಕೇಂದ್ರದಿಂದಲೇ ನಿವಾರಿಸಿ, ಉಪಗ್ರಹ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಪ್ರಯೋಗಗಳು ಯಶಸ್ವಿಯಾದವು. ಆರಂಭದಲ್ಲಿ ಮೂರು ವರ್ಷಗಳ ಕಾಲದ ಕಾರ್ಯಾಚರಣೆಗೆ ಯೋಜಿಸಿದ್ದರೂ ಈ ಕಾರ್ಯವಾಹಿ ಉಪಗ್ರಹವು ಸುಮಾರು ಐದು ವರ್ಷಗಳ ಕಾಲ ಕಕ್ಷೆಯಲ್ಲಿದ್ದು ಅನೇಕಾನೇಕ ಉಪಯುಕ್ತ ಮಾಹಿತಿಗಳನ್ನು ರವಾನಿಸಿ ಭಾರತೀಯ ದೂರ ಸಂವೇದಿ ತಂತ್ರಜ್ಞಾನಕ್ಕೆ ಮಹತ್ತರ ಕೊಡುಗೆಯನ್ನು ನೀಡಿತು. ಈ ಅನುಭವವನ್ನು ಬಳಸಿಕೊಂಡು ಅಭಿವೃದ್ಧಿಗೊಳಿಸಲಾದ ಐಆರ್‍ಎಸ್-1ಬಿ ಉಪಗ್ರಹವನ್ನು 21ನೇ ಆಗಸ್ಟ್ 1991ರಲ್ಲಿ ಉಡಾಯಿಸಲಾಯಿತು. ಇದು ಹತ್ತು ವರ್ಷಗಳಿಗೂ ಮೀರಿ ಯಶಸ್ವೀ ಕಾರ್ಯಾಚರಣೆ ಮಾಡಿತು. ಈ ಉಪಗ್ರಹದಿಂದÀ ವಿಶ್ವದ ಇತರ ದೇಶಗಳ ಮಾಹಿತಿಗಳನ್ನು ಗ್ರಹಿಸಿ ಅವುಗಳಿಗೆ ತಲುಪಿಸಿದ್ದು ವಿಶೇಷ ಸಂಗತಿ. ಆನಂತರ ಐಆರ್‍ಎಸ್-1ಇ ಉಪಗ್ರಹವನ್ನು ಭಾರತದ್ದೇ ಆದ ಉಡಾವಣಾ ರಾಕೆಟ್ ಮೂಲಕ 1993 ರಲ್ಲಿ ಅಂತರಿಕ್ಷಕ್ಕೆ ಕಳುಹಿಸಲಾಯಿತಾದರೂ ತಾಂತ್ರಿಕ ತೊಂದರೆಗಳಿಂದ ಅದನ್ನು ಕಕ್ಷೆಯಲ್ಲಿ ಸ್ಥಿರಗೊಳಿಸುವ ಪ್ರಯತ್ನ ವಿಫಲವಾಯಿತು. 1994ರಲ್ಲಿ ಐಆರ್‍ಎಸ್-ಪಿ2 ಉಪಗ್ರಹವು ಅಂತರಿಕ್ಷ ಪಥದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಾರಂಭಿಸಿತು. ಅದರಲ್ಲಿದ್ದ ಎರಡು ಕ್ಯಾಮೆರಾಗಳು ಭೂಕೇಂದ್ರದ ನಿಯಂತ್ರಣಾ ಆದೇಶಗಳಿಗೆ ಅನುಗುಣವಾಗಿ ಭೂಪ್ರದೇಶದ ಚಿತ್ರಗಳನ್ನು ಸೆರೆಹಿಡಿದು ಕಳುಹಿಸಲಾರಂಭಿಸಿದವು.

ಅಂತರಿಕ್ಷದಲ್ಲಿ ಸತತವಾಗಿ ಪ್ರದಕ್ಷಿಣೆ ಹಾಕುತ್ತಾ ತಮ್ಮ ತಮ್ಮ `ಕಣ್ಣುಗಳಿಂದ ವಿಷಯಗಳನ್ನು ಗ್ರಹಿಸಿ ಭೂಮಿಗೆ ರವಾನಿಸುವ ಕ್ರಿಯೆಗಳಲ್ಲಿ ತೊಡಗಿದ ಐಆರ್‍ಎಸ್-1ಎ, 1ಬಿ, 1ಇ ಹಾಗೂ ಪಿ2 ಹೆಸರಿನ ಮೊದಲ ಪೀಳಿಗೆಯ ಉಪಗ್ರಹಗಳ ನಂತರ ಉಡಾಯಿಸಲಾದ ಎರಡನೆಯ ಪೀಳಿಗೆಯ ಮೊದಲ ಉಪಗ್ರಹ ಐಆರ್‍ಎಸ್ -1ಸಿ. ಇದನ್ನು ಡಿಸೆಂಬರ್ 1995ರಲ್ಲಿ ಕಜಕಸ್ಥಾನದಿಂದ ಕಕ್ಷೆಗೆ ಹಾರಿಬಿಡಲಾಯಿತು. ಇದರಲ್ಲಿನ ಕ್ಯಾಮೆರಾಗಳು ಅತಿ ಸೂಕ್ಷ್ಮತರವಾಗಿದ್ದು ಹೆಚ್ಚು ವಿಶಾಲ ಪ್ರದೇಶಗಳ ಹೆಚ್ಚು ಸ್ಪಷ್ಟವಾದ ಚಿತ್ರಗಳನ್ನು ಇವುಗಳಿಂದ ಪಡೆಯಲು ಸಾಧ್ಯವಾಯಿತು. ಮೂರು ಆಯಾಮದ ಈ ಚಿತ್ರಗಳನ್ನು ಉಪಗ್ರಹದಲ್ಲಿನ ಟೇಪ್ ರೆಕಾರ್ಡರಿನಲ್ಲಿ ದಾಖಲಿಸುವ ವ್ಯವಸ್ಥೆಯನ್ನು ಅಳವಡಿಸ ಲಾಗಿತ್ತು. ಇದರಿಂದ ಅಪಾರ ಮಾಹಿತಿ ಲಭ್ಯವಾಯಿತು. ಈ ವೇಳೆಗೆ ಉಪಗ್ರಹ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರೌಢಿಮೆ ಯನ್ನು ಗಳಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು 1996 ಮಾರ್ಚ್ 21ರಂದು ಸ್ವದೇಶಿ ಪಿಎಸ್‍ಎಲ್‍ವಿ ರಾಕೆಟ್ ಮೂಲಕ ಐಆರ್‍ಎಸ್-ಪಿ3 ಎಂಬ ಮತ್ತೊಂದು ಉಪಗ್ರಹವನ್ನು 817 ಕಿಲೋಮೀಟರ್ ಎತ್ತರದ ಕಕ್ಷೆಗೆ ಸೇರಿಸಿತು. ಈ ಉಪಗ್ರಹದಲ್ಲೂ ಹಲವಾರು ಅತಿಸೂಕ್ಷ್ಮ ಕ್ಯಾಮೆರಾಗಳಿದ್ದುದರ ಜೊತೆಗೆ ಜರ್ಮನಿಯ ಡಿಎಲ್‍ಆರ್ ಅಂತರಿಕ್ಷ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಗೊಳಿಸಿದ `ಮಾಸ್ ಉಪಕರಣವನ್ನು (ವರ್ಣರೋಹಿತದ ವಿವಿಧ ಭಾಗಗಳನ್ನು ಸ್ಕ್ಯಾನಿಂಗ್ ಮೂಲಕ ದಾಖಲಿಸಬಲ್ಲ ಎಲೆಕ್ಟ್ರಾನಿಕ್ ಉಪಕರಣ) ಅಳವಡಿಸಲಾಗಿತ್ತು. ಅಲ್ಲದೆ ಈ ಉಪಗ್ರಹದಲ್ಲಿ, ಕ್ಷ-ಕಿರಣಗಳನ್ನು ಹೊರಚಿಮ್ಮುವ ಆಕಾಶಕಾಯಗಳ ಅಧ್ಯಯನ ಮಾಡುವ ಉಪಕರಣಗಳನ್ನೂ ಅಳವಡಿಸಲಾಗಿತ್ತು. ಬಾಹ್ಯಾಕಾಶದ ವಿಶೇಷಗಳಾದ `ನ್ಯೂಟ್ರಾನ್ ನಕ್ಷತ್ರಗಳು, `ಕಪ್ಪುರಂದ್ರ ಮುಂತಾದ ಆಕಾಶಕಾಯಗಳನ್ನು ಅಭ್ಯಸಿಸಲು ಅಗತ್ಯವಾದ ಮಾಹಿತಿ ಸಂಗ್ರಹಣಾ ವ್ಯವಸ್ಥೆಗಳನ್ನು ಇದರಲ್ಲಿ ಅಳವಡಿಸಲಾಗಿತ್ತು.

ಐಆರ್‍ಎಸ್-ಪಿ2 ಮತ್ತು ಪಿ3 ಉಪಗ್ರಹಗಳನ್ನು ಸ್ವದೇಶಿ ರಾಕೆಟ್ ಪಿಎಸ್‍ಎಲ್‍ವಿ ಮೂಲಕ ಸುರಕ್ಷಿತವಾಗಿ ಕಕ್ಷೆಗೆ ಉಡಾಯಿಸಿದ ಸಫಲತೆಯಿಂದಾಗಿ ಇದೇ ರಾಕೆಟ್ಟನ್ನು ಬಳಸಿ 1997ರಲ್ಲಿ ಐಆರ್‍ಎಸ್-1ಡಿ ಉಪಗ್ರಹ ವನ್ನು ಭೂಕೇಂದ್ರ ಕಕ್ಷೆಗೆ ಕಳುಹಿಸಲಾಯಿತು. ಈ ರೀತಿ ಕಕ್ಷೆಗೆ ತಲುಪಿದ ಹಲವಾರು ಉಪಗ್ರಹಗಳು ಈಗಲೂ ಯಶಸ್ವೀ ಕಾರ್ಯಾಚರಣೆಯಲ್ಲಿವೆ.
ಭಾರತೀಯ ದೂರಸಂವೇದಿ ಉಪಗ್ರಹಗಳು ಭೂಖಂಡದ ಲಕ್ಷಾಂತರ ಚಿತ್ರಗಳನ್ನು ಭೂಕೇಂದ್ರಗಳಿಗೆ ರವಾನಿಸುತ್ತಿವೆ. ಇವುಗಳನ್ನು ನಮ್ಮ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಉಪಯುಕ್ತವಾದ ರೀತಿಯಲ್ಲಿ ಬಳಸಬಹುದು.

ದೂರಸಂವೇದಿ ಉಪಗ್ರಹಗಳಿಂದ ಲಬ್ಧವಾಗುವ ಮಾಹಿತಿಗಳು ಸಾಗರ ವಿಜ್ಞಾನ, ನೆರೆ ನಿಯಂತ್ರಣ, ಅಂತರ್ಜಲ ಅನ್ವೇಷಣೆ, ಜಲಸಂಪನ್ಮೂಲಗಳ ಅಭಿವೃದ್ಧಿ, ಮೀನುಗಾರಿಕೆ, ಅರಣ್ಯಗಳ ಅಭಿವೃದ್ಧಿ, ಲಾಭದಾಯಕ ಕೃಷಿ, ಖನಿಜಗಳ ಅನ್ವೇಷಣೆ, ಶಕ್ತಿ ನಿಕ್ಷೇಪಗಳ ಶೋಧನೆ, ಪರಿಸರ ಮಾಲಿನ್ಯ ಸ್ಥಿತಿ, ನಗರಾಭಿವೃದ್ಧಿ, ಸಾರಿಗೆ ಸಮಸ್ಯೆಗಳ ನಿವಾರಣೆ ಇತ್ಯಾದಿ ಅನೇಕ ಕ್ಷೇತ್ರಗಳಿಗೆ ದೃಶ್ಯ ಮತ್ತು ಅಂಕಿರೂಪದ ಅತ್ಯುಪಯುಕ್ತ ಅಂಶಗಳಾಗಿ ಪರಿಣಮಿಸುತ್ತವೆ. ಈ ದಿಸೆಯಲ್ಲಿ, ವ್ಯವಸಾಯದಿಂದ ಹಿಡಿದು ಪಟ್ಟಣ ಪ್ರದೇಶಗಳ ಭೂಮಿಯ ಬಳಕೆ, ವಾರ್ಷಿಕ ಯೋಜನೆಗಳು ಹಾಗೂ ಸಾಗರ ಅಧ್ಯಯನಗಳಿಗೆ ದೂರ ಸಂವೇದಿ ತಂತ್ರe್ಞÁನವನ್ನು ಬಳಸಲಾಗುತ್ತಿದೆ. 

ದೂರಸಂವೇದಿ ಉಪಗ್ರಹ ಐಆರ್‍ಎಸ್-ಐಸಿ ಯಂತೆಯೇ 1997 ಸೆಪ್ಟಂಬರ್ 28ರಂದು ಉಡಾಯಿಸಿದ ಐಆರ್‍ಎಸ್-1ಡಿ ಉಪಗ್ರಹವೂ ಭಾರತದಲ್ಲಿ ಕೃಷಿ ಜಮೀನಿನ ಎಕರೆವಾರು ಬೆಳೆಯ ಪ್ರಮಾಣ, ಫಸಲು ಅಂದಾಜು, ಭೂಮಿಯ ಬಳಕೆಯ ಪ್ರಮಾಣ ಮುಂತಾದವುಗಳ ಬಗ್ಗೆ ಅಮೂಲ್ಯ ಮಾಹಿತಿಗಳನ್ನು ನೀಡುತ್ತಿವೆ. ಇದರಿಂದಾಗಿ ಬೆಳೆಯೊಂದರ ಎಕರೆವಾರು ಇಳುವರಿಯನ್ನು ಅಂದಾಜು ಮಾಡಬಹುದು. ಬೆಳೆಯೊಂದಕ್ಕೆ ರೋಗವೇನಾದರೂ ತಗುಲಿದ್ದಲ್ಲಿ ಅದು ರೈತನ ಗಮನಕ್ಕೆ ಬರುವ ಮೊದಲೇ ದೂರಸಂವೇದಿ ಉಪಗ್ರಹದ ಚಿತ್ರಗಳ ಮೂಲಕ ತಿಳಿದುಬಿಡುತ್ತದೆ. ನಮ್ಮ ಕಣ್ಣುಗಳಿಗಿಂತ ಸೂಕ್ಷ್ಮವಾದ ದೂರಸಂವೇದಿ ಉಪಗ್ರಹಗಳ ಕ್ಯಾಮರಾಗಳು ಯಾವುದೇ ಸಸ್ಯಕ್ಕೆ ಸಂಬಂಧಿಸಿದ ಯಾವುದೇ ಅಂಶಗಳನ್ನು ಗುರುತಿಸಿಬಿಡುತ್ತವೆ. ಸಮೃದ್ಧವಾದ ಹಾಗೂ ರೋಗಪೀಡಿತವಾಗುತ್ತಿರುವ ಸಸ್ಯಗಳ ನಡುವಿನ ಅತ್ಯಲ್ಪ ವ್ಯತ್ಯಾಸಗಳನ್ನೂ ಸಹ ಈ ಕ್ಯಾಮರಾಗಳು ಸಮರ್ಥವಾಗಿ ದಾಖಲಿಸುತ್ತವೆ. 

ಭಾರತದ ಸುತ್ತಮುತ್ತಲಿನ ಸಾಗರಗಳ ಅಧ್ಯಯನಗಳಿಗೆ ಅಗತ್ಯವಾದ ಮಾಹಿತಿಗಳನ್ನು ನೀಡಬಲ್ಲ ಐಆರ್‍ಎಸ್-ಪಿ4 ಉಪಗ್ರಹ ಹಾಗೂ ಆಯ್ದ ಪ್ರದೇಶಗಳ ಚಿತ್ರೀಕರಣವನ್ನು ಸಮರ್ಥವಾಗಿ ಮಾಡಬಲ್ಲ ಐಆರ್‍ಎಸ್-ಪಿ6 ಉಪಗ್ರಹಗಳನ್ನು 2003ನೆಯ ಇಸವಿಯಲ್ಲಿ ಉಡಾಯಿಸಲಾಯಿತು. 

ಭಾರತೀಯ ಉಪಗ್ರಹಗಳಿಂದ ಬರುವ ಮಾಹಿತಿಗಳನ್ನು ಬಳಸಿಕೊಂಡು ವಾರ್ಷಿಕವಾಗಿ ನಮ್ಮ ದೇಶದಲ್ಲಿ ಬೆಳೆಯುವ ಬತ್ತ, ಗೋಧಿ, ಜೋಳ, ಕಬ್ಬು, ಕಡಲೆಕಾಯಿ ಮುಂತಾದ ಅನೇಕ ಆಹಾರಧಾನ್ಯಗಳ ಪ್ರಮಾಣವನ್ನು ಅಂದಾಜಿಸಲಾಗಿದೆ. ಉಪಗ್ರಹದ ಮಾಹಿತಿಗಳಿಂದ ನಮ್ಮ ದೇಶದಲ್ಲಿರುವ ಬಂಜರು ಭೂಮಿಯ ಪ್ರಮಾಣ ವನ್ನೇ ಅಲ್ಲದೆ ಅದು ಬಂಜರಾಗಲು ಕಾರಣಗಳನ್ನೂ ತಿಳಿದುಕೊಳ್ಳಬಹುದಾಗಿದೆ. ಭೂಮಿಯನ್ನು ಹಸಿರಾಗಿ ಡುವ, ಭೂ ಸವಕಳಿಯನ್ನು ತಡೆಯುವ, ಮಳೆ ಮೋಡಗಳಿಗೆ ಕಾರಣವಾದ ಮತ್ತು ಮಾನವನ ಜೀವನಕ್ಕೆ ಅನೇಕ ವಿಧಗಳಲ್ಲಿ ಸಹಾಯಮಾಡುವ ಅರಣ್ಯ ಪ್ರದೇಶಗಳ ಬಗ್ಗೆ ಉಪಗ್ರಹಗಳಿಂದ ಅತ್ಯಮೂಲ್ಯ ಮಾಹಿತಿಗಳು ದೊರೆಯುತ್ತವೆ. ಭಾರತಾದ್ಯಂತ ಇರುವ ಜಲಸಂಪನ್ಮೂಲಗಳ, ಅವುಗಳ ಬಳಕೆ / ದುರ್ಬಳಕೆಯ ಬಗ್ಗೆ ದೂರಸಂಪರ್ಕ ಮಾಹಿತಿಗಳಿಂದ ಉಪಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಿಮಾಲಯದಲ್ಲಿ ಕರಗುವ ಮಂಜಿನ ಪ್ರಮಾಣವನ್ನು ಅಂದಾಜುಮಾಡಿ ಮುಂದೆ ಉಂಟಾಗಬಹುದಾದ ನೆರೆಹಾವಳಿಗಳ ವಿರುದ್ಧ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬಹುದು. ಹೀಗೆ ಭೂಮಿಯ ಮೇಲಿನ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ದೂರಸಂವೇದಿ ಉಪಗ್ರಹಗಳಲ್ಲಿ ಮತ್ತು ಭೂಕೇಂದ್ರಗಳಲ್ಲಿ ಕ್ಷಣಕ್ಷಣಕ್ಕೂ ಸಂಗ್ರಹವಾಗುವ ಅಪಾರ ಮಾಹಿತಿಗಳ ಸಂಗ್ರಹಣೆ ಹಾಗೂ ಸಂಸ್ಕರಣೆಯ ಬೃಹತ್ ಕಾರ್ಯದಲ್ಲಿ ಗಣಕಗಳ ಹೆಚ್ಚುತ್ತಾ ಬಂದಿದೆ. 

ವಿಶ್ವಾದ್ಯಂತ ನಡೆಯುತ್ತಿರುವ ಹಲವಾರು ಬಗೆಯ ವ್ಯವಹಾರಗಳ ಅನೇಕ ಸ್ತರಗಳಲ್ಲಿ ಅಂದಂದಿನ ಆಗುಹೋಗುಗಳ ಆರ್ಥಿಕ ಹಾಗೂ ಇತರ ಬಗೆಯ ವಿಶ್ಲೇಷಣೆಯ ಆಧಾರಿತ ಚಟುವಟಿಕೆಗಳು ನಡೆಯು ತ್ತಿವೆ ಹಾಗೂ ಈ ನಿರ್ಧಾರಗಳು ಅನಿವಾರ್ಯವೂ ಆಗಿವೆ. ಇಂತಹ ಪ್ರತಿ ಚಟುವಟಿಕೆಗೆ ಸಂಬಂಧಿಸಿದಂತೆ ಅಪಾರ ಮಾಹಿತಿಗಳು, ಚಿತ್ರಗಳು, ಭೂಪಟಗಳು ಮುಂತಾದವನ್ನು ಬೃಹತ್ ದತ್ತಸಂಚಯದಿಂದ ಆಯ್ದುಕೊಳ್ಳಬೇಕು; ಇವೆಲ್ಲವೂ ಆಗಿಂದಾಗ್ಗೆ ಸುವ್ಯವಸ್ಥಿತ ರೂಪದಲ್ಲಿ ದೊರಕುವಂತಾಗಬೇಕು. ಸಮಾ ನಾಂತರವಾಗಿಯೂ ಸುವ್ಯವಸ್ಥಿತವಾಗಿಯೂ ನಡೆಯಬೇಕಾದ ಈ ಕ್ರಿಯೆಗಳನ್ನು ನಿರ್ವಹಿಸುವ ವ್ಯವಸ್ಥೆಯೇ ಭೌಗೋಳಿಕ ಮಾಹಿತಿ ವ್ಯವಸ್ಥೆ(ಜಿಐಎಸ್). ದೂರಸಂವೇದಿ ಮಾಹಿತಿಗಳನ್ನು ಗ್ರಹಿಸಿ, ಶೇಖರಿಸಿಟ್ಟುಕೊಂಡು, ಸಂಸ್ಕರಿಸಿ ಅಗತ್ಯವಾದ ಉತ್ತರಗಳನ್ನು ನೀಡುವ ಗಣಕ ಆಧಾರಿತ ವ್ಯವಸ್ಥೆಯೇ ಈ ಭೌಗೋಳಿಕ ಮಾಹಿತಿ ವ್ಯವಸ್ಥೆ ಎಂದು ಈಗ ಅರ್ಥೈಸಲಾಗಿದೆ.
ಇಂತಹ ಆರಂಭಿಕ ವ್ಯವಸ್ಥೆಯನ್ನು ಭಾರತದಲ್ಲಿ 1980ರಿಂದಲೇ ಬಳಸುವ ಕ್ರಿಯೆ ಆರಂಭವಾಯಿತು. ಯೋಜನಾ ಆಯೋಗ ಮತ್ತು ಬಾಹ್ಯಾಂತರಿಕ್ಷ ಇಲಾಖೆಗಳು ಒಂದಾಗಿ ಭೌಗೋಳಿಕ ಮಾಹಿತಿ ವ್ಯವಸ್ಥೆಯ ವ್ಯಾಪಕ ಬಳಕೆಯ ಆಯಾಮಗಳನ್ನು ಗುರುತಿಸಿವೆ. ಅವುಗಳನ್ನು ಕೆಳಕಂಡಂತೆ ಪಟ್ಟಿ ಮಾಡಲಾಗಿದೆ.

ಕೃಷಿ ಮತ್ತು ತೋಟಗಾರಿಕೆ: ಈ ಚಟುವಟಿಕೆಗಳು ನಡೆಯುವ ಒಟ್ಟು ಪ್ರದೇಶ, ಫಸಲು, ಮುಖ್ಯವಾಗಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾಗೂ ವಾಣಿಜ್ಯ ಬೆಳೆಗಳ ಪ್ರಮಣ ಮತ್ತು ಪರಿಸ್ಥಿತಿಗಳ ಅಂದಾಜು.

ಕರಾವಳಿ ಹಾಗೂ ಮತ್ಸ್ಯೋದ್ಯಮ: ಕರಾವಳಿ ಭೂಮಿಯ ಬಳಕೆ, ಭೂಸ್ಥಿತಿಯ ಅಧ್ಯಯನ, ಅಲ್ಲಿ ವಾಸಿಸುವ ಜೀವಿ ಸಂಕುಲ, ಅಲ್ಲಿನ ಪರಿಸರ ನಿರ್ವಹಣೆ, ಮತ್ಸ್ಯೋದ್ಯಮಕ್ಕೆ ಸೂಕ್ತವೆನಿಸುವ ಪ್ರದೇಶಗಳ ಆಯ್ಕೆ, ಸಮೀಕ್ಷೆ ಮುಂತಾದ ಮಾಹಿತಿಗಳ ಸಂಗ್ರಹಣೆ, ಅಧ್ಯಯನ.

ಪ್ರಾಕೃತಿಕ ವಿಕೋಪಗಳ ನಿರ್ವಹಣೆ: ಕಾಡ್ಗಿಚ್ಚುಗಳು ಮತ್ತು ಬರಪೀಡಿತ ಪ್ರದೇಶಗಳ ಬಗ್ಗೆ ಅಂದಾಜು, ಭೂಕುಸಿತವಾಗಬಹುದಾದ ಪ್ರದೇಶಗಳ ಬಗ್ಗೆ ತಿಳಿವಳಿಕೆ, ಪ್ರವಾಹದ ಪರಿಣಾಮ ಗಳಿಂದ ಆದ ನಷ್ಟದ ಅಂದಾಜು, ಚಂಡಮಾರುತಗಳು ಭೂಕಂಪ ಮುಂತಾದವುಗಳ ಬಗ್ಗೆ ಮುನ್ಸೂಚನೆ ಹಾಗೂ ಸತತ ಮಾಹಿತಿಗಳು.

ಭೂವಿe್ಞÁನ ಇಂಜಿನಿಯರಿಂಗ್ ಮತ್ತು ಭೂಮ್ಯಂತರ್ಗತ ಖನಿಜಗಳ ಗಣಿಗಾರಿಕೆ: ನಿರ್ದಿಷ್ಟ ಖನಿಜಗಳ ಅಸ್ತಿತ್ವದ ಮಾಹಿತಿ, ದೇಶದೊಳಗೆ ಮತ್ತು ಸಾಗರದಾಳದಲ್ಲಿ ದೊರೆಯಬಹುದಾದ ತೈಲಸಂಪತ್ತಿನ ಬಗ್ಗೆ ಮಾಹಿತಿ, ಭೌಗೊಳಿಕವಾದ ವಿವಿಧ ರೀತಿಯ ಮಾಹಿತಿಗಳನ್ನು ನೀಡುವ ನಿಖರವಾದ ಭೂಪಟಗಳ ರಚನೆ.

ಅರಣ್ಯ ನಿರ್ವಹಣೆ : ಅರಣ್ಯ ವಿಸ್ತಾರ, ಅರಣ್ಯ ಮಾದರಿಗಳು, ಅರಣ್ಯ ಸಾಂದ್ರತೆ, ಅರಣ್ಯ ಒತ್ತುವರಿ, ಅರಣ್ಯದಲ್ಲಿನ ಸಸ್ಯಗಳ ವರ್ಗೀಕರಣ, ಜೈವಿಕ ಸಂಪತ್ತು, ಹುಲ್ಲುಗಾವಲು ಮುಂತಾದವುಗಳ ಬಗ್ಗೆ ಮಾಹಿತಿಗಳು.

ಪರಿಸರ : ಪರಿಸರದ ಬಗ್ಗೆ ಪರಿಶೋಧನೆ, ಅಭಿವೃದ್ಧಿ ಯೋಜನೆಗಳಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ವಿಶ್ಲೇಷಣೆ, ಜಲಾಯನ ಪ್ರದೇಶಗಳು ಪರಿಸರ ಮಾಲಿನ್ಯದ ಬಗ್ಗೆ ತೀವ್ರಗಮನ ಹಾಗೂ ಮಾಲಿನ್ಯ ತಡೆಯುವಿಕೆಯ ಬಗ್ಗೆ ಗಮನ.
ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಭೂಮಿಯ ಕೃಷಿಯೇತರ ಬಳಕೆಗಾಗಿ ಯೋಜನೆಗಳು: ಕೈಗಾರಿಕಾ ಆಯ್ಕೆ, ಲವಣದ ಉತ್ಪಾದನೆಗೆ ಯೋಗ್ಯವಾದ ಕೈಗಾರಿಕಾ ಪ್ರದೇಶಗಳನ್ನು ಗುರುತಿಸು ವುದು, ಹೆದ್ದಾರಿಗಳು ಮತ್ತು ಇತರೆ ರಸ್ತೆ ನಿರ್ಮಾಣಗಳಿಗೆ ಭೂಪ್ರದೇಶಗಳಲ್ಲಿ ಜಾಡನ್ನು ಗುರುತಿಸು ವುದು, ಕಿರು ಜಲವಿದ್ಯುತ್ ಯೋಜನೆಗಳಿಗೆ ತಾಣಗಳನ್ನು ಗುರುತಿಸುವುದು, ಜಲಾಯನ ಪ್ರದೇಶಗಳ ಅಭಿವೃದ್ಧಿ.

ನಗರ ಪ್ರದೇಶಗಳ ಅಭಿವೃದ್ಧಿ ಮತ್ತು ಯೋಜನೆ : ನಗರಗಳಲ್ಲಿ ಜನ ಮತ್ತು ವಾಹನಗಳ ದಟ್ಟಣೆಯ ವಿಶ್ಲೇಷಣೆ ಮತ್ತು ನಿರ್ವಹಣೆ, ರಸ್ತೆಗಳ ಬಗ್ಗೆ ಯೋಜನೆಗಳು.

ಜಲಮೂಲ ಅಭಿವೃದ್ಧಿ ಮತ್ತು ಯೋಜನೆಗಳು : ಮಣ್ಣು ಮತ್ತು ಜಲಸಂಗ್ರಹಣೆ ಮತ್ತು ಅಭಿವೃದ್ಧಿ, ಬರಡು ಭೂಮಿ ಅಭಿವೃದ್ಧಿ, ಅಂತರ್ಜಲ ಸಮೀಕ್ಷೆ, ಹಿಮಜಲದ ಸಂಗ್ರಹಣೆ, ಅಂತರ್ಜಲ ಮಟ್ಟವನ್ನು ಕಾಪಾಡುವ ವಿಧಾನಗಳು, ಜಲಾಶಯಗಳಲ್ಲಿ ಹೂಳು ತುಂಬಿಕೊಳ್ಳುವ ಬಗ್ಗೆ ನಿರಂತರ ಗಮನ, ಈ ಮಾಹಿತಿಗಳ ಬಗ್ಗೆ ವಿಶ್ಲೇಷಣೆ.

ಈ ಎಲ್ಲಾ ಬಗೆಯ ಮಾಹಿತಿಗಳ ಸುವ್ಯವಸ್ಥಿತ ನಿರ್ವಹಣೆ, ಪ್ರಸಾರ ಹಾಗೂ ಕೇಳಿದೊಡನೆ, ಕೇಳಿದಷ್ಟು, ಮಾಹಿತಿ ಅತ್ಯುತ್ತಮ ರೀತಿಯ ದತ್ತ ಸಂಸ್ಕರಣೆ ಹಾಗೂ ಮಾಹಿತಿ ತಂತ್ರe್ಞÁನ ವ್ಯವಸ್ಥೆ.

ಅಂತರಿಕ್ಷ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಈಗ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಮೇಲ್ಕಂಡ ಎಲ್ಲಾ ಯೋಜನೆಗಳೂ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುತ್ತವೆ ಎಂದು ನಂಬಲಾಗಿದೆ.   					 (ಚಿ.ವಿ.ಶ್ರೀನಾಥಶಾಸ್ತ್ರೀ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ